ಕ್ಯಾಲೆಂಡರ್, ಹ್ಯೂ ಲಾಂಗ್‍ಬೋರ್ನ್
1863-1930. ಬ್ರಿಟಿಷ್ ಭೌತ ವಿಜ್ಞಾನಿ.  ಉಷ್ಣ ಹಾಗೂ ಉಷ್ಣಗತಿ ಶಾಸ್ತ್ರದಲ್ಲಿ ಸಂಶೋಧನೆಗಳನ್ನು ಮಾಡಿ ಪ್ರಸಿದ್ಧನಾದ.  ಈತನ ಪ್ರಥಮ ವ್ಯಾಸಂಗ ಬ್ರಿಟಿಷ್  ಮಾರ್ಲ್‍ಬರೋನಲ್ಲಿ.  ಮುಂದೆ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿದ.  ಅಲ್ಲಿನ ಆನರ್ಸ್ ಪರೀಕ್ಷೆಯಲ್ಲಿ ಗಣಿತ ಶಾಸ್ತ್ರ-ಪ್ರಾಚೀನ ಕಲೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ.

ಪ್ರಯೋಗಕಾಲದಲ್ಲಿ ಸಂಭವಿಸುವ ಉಷ್ಣಪ್ರಸಾರದಿಂದುಂಟಾಗುವ ಉಷ್ಣನಷ್ಟವನ್ನು ಕಡಿಮೆಯಾಗಿಸಿ, ಉಪಕರಣದ ಸಮಜಲವನ್ನು ಗಣನೆಗೆ ತೆಗೆದುಕೊಳ್ಳದೆ, ದ್ರವಗಳ ಗ್ರಾಹ್ಯೋಷ್ಣವನ್ನು ನಿರ್ಣಯಿಸುವ ವಿಧಾನವೊಂದನ್ನು ರೂಪಿಸಿದ ಕೀರ್ತಿ ಕ್ಯಾಲೆಂಡರನದು.  ಇದಕ್ಕಾಗಿ ಈತ ತಯಾರಿಸಿದ ಉಪಕರಣವೇ ಕ್ಯಾಲೆಂಡರನ ಆವಿಚ್ಛಿನ್ನ ಪ್ರವಾಹದ ಕೆಲೊರಿಮಾಪಕ.  ಈ ಉಪಕರಣದಲ್ಲಿ ನಿರಂತರವಾಗಿ ಗೊತ್ತಾದ ಮೊತ್ತದಲ್ಲಿ ಹರಿಯುವ ದ್ರವದ ಉಷ್ಣತೆಯನ್ನು ಹೆಚ್ಚಿಸಲು ವಿದ್ಯುಚ್ಛಕ್ತಿಯನ್ನು ಬಳಸಲಾಗುವುದು.  ಇದೇ ಉಪಕರಣದಲ್ಲಿ ದ್ರವದ ನೀರನ್ನು ಹರಿಸಿ (ಗ್ರಾಹ್ಯೋಷ್ಣ 1 ಅಥವಾ ಗೊತ್ತಾದ ಗ್ರಹ್ಯೋಷ್ಣವುಳ್ಳ ಯಾವುದಾದರೂ ದ್ರವ) ಉಪಯೋಗಿಸಲ್ಪಟ್ಟ ವಿದ್ಯುಚ್ಛಕ್ತಿಯಿಂದಾದ ಕೆಲಸ ಮತ್ತು ಅದರಿಂದುಂಟಾದ ಉಷ್ಣದ ಉತ್ಪತ್ತಿ ಇವುಗಳ ನಡುವಣ ನಿಷ್ಪತ್ತಿಯನ್ನು ಕಂಡುಹಿಡಿದು ಉಷ್ಣದ ಯಾಂತ್ರಿಕ ಸಾಮ್ಯದ ಬೆಲೆಯನ್ನು ನಿರ್ಣಯಿಸಲು ಸಾಧ್ಯ.  ಅನಿಲಗಳ ವಿಕಾಸವನ್ನೇ ಉಷ್ಣತೆಯ ಅಳತೆಗೆ ಆಧಾರವಾಗಿಟ್ಟುಕೊಂಡು ಸಮೀಕೃತ ಗಾಳಿಯುಳ್ಳ ಅನಿಲ ಉಷ್ಣತಾಮಾಪಕವನ್ನು ನಿರ್ಮಿಸಿದವ ಕ್ಯಾಲೆಂಡರ್ (1891).  ರೇಡಿಯೋ ತ್ರಾಸನ್ನು ನಿಯೋಜಿಸಿದ ಕೀರ್ತಿಯೂ ಈತನದೇ.

ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ಧಾಗ ಕ್ಯಾಲೆಂಡರ್, ಲೋಹಗಳ ರೋಧತ್ವದಲ್ಲಿ ಉಷ್ಣತೆಯ ಹೆಚ್ಚುವಿಕೆಯ ಪರಿಣಾಮವನ್ನು ಕುರಿತು ಸಂಶೋಧನೆ ನಡೆಸಿದ.  ಇದರ ಫಲವಾಗಿ ಸ್ವಂತ ಉಷ್ಣತಾಮಾಪಕವೊಂದನ್ನು ತಯಾರಿಸಿದ.  ಪ್ಲಾಟಿನಂ ತಂತಿಯುಳ್ಳ ರೋಧ ಉಷ್ಣಮಾಪಕವೆಂದು ಇದರ ಹೆಸರು.  ಮುಂದೆ ಕ್ಯಾಲೆಂಡರ್ ನೀರಿನ ಹಬೆಯ ಮೇಲಿನ ಸಂಶೋಧನೆ ಮತ್ತು ಆತನ ಹೆಸರಿನಿಂದಲೇ ಕರೆಯಲ್ಪಡುವ ಹಬೆಯ ಸಮೀಕರಣವನ್ನು ಬೆಳಕಿಗೆ ತಂದ.  ಅತಿ ಹೆಚ್ಚು ಒತ್ತಡ ಮತ್ತು ಉಷ್ಣತೆಯಲ್ಲಿರುವ ಆವಿಯ ಮೇಲಿನ ಸಂಶೋಧನೆ ಆವಿಯ ತಿರುಬಾನಿ ಉತ್ಪಾದಕರ ಮತ್ತು ವಿದ್ಯುತ್ ಸಂಶೋಧನಾ ಕೇಂದ್ರದವರಿಗೆ ಬಹಳ ಉಪಯುಕ್ತವಾಗಿದ್ದವು.  1925ರಲ್ಲಿ ಈ ಕೇಂದ್ರದವರಿಗೆ ಸಲ್ಲಿಸಿದ ಕ್ಯಾಲೆಂಡರನ ಲೇಖನವೊಂದರಲ್ಲಿ ಅತಿ ಹೆಚ್ಚು ಒತ್ತಡದಲ್ಲಿರುವ ಹಬೆಯ ಒಟ್ಟು ಉಷ್ಣವನ್ನು ಅವಿಚ್ಛಿನ್ನ ಪ್ರವಾಹ ರೀತಿಯಿಂದ, ನಿರ್ಧರಿಸುವ ವಿಧಾನವೊಂದನ್ನು ತಿಳಿಸಲಾಗಿತ್ತು.  ಹಾರುವ ಯಂತ್ರಗಳಲ್ಲಿ ಉಪಯೋಗಿಸುವ ಮೆರುಗು ಎಣ್ಣೆಗಳಿಗೂ ಸ್ಫೋಟನಕ್ಕೂ ಇರುವ ಸಂಬಂಧವನ್ನು ಕುರಿತು ಅಲ್ಲದೇ ಆವಿಯ ಎಂಜಿನಿನಲ್ಲಿ ದಬ ದಬ ಶಬ್ದ ಮಾಡುವುದರಲ್ಲಿ ಆಂಟಿಕ್ಲಾಕ್ ವಸ್ತುಗಳ ಪರಿಣಾಮವನ್ನು ಕುರಿತು ಕ್ಯಾಲೆಂಡರ್ ತನ್ನ ಸಹೋದ್ಯೋಗಿಗಳೊಡನೆ ಸಂಶೋಧನೆ ನಡೆಸಿದ್ದ.  					   (ಜೆ.ಎಸ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ